ತೆಂಗಿನ ಬೆಳೆಗಾರರೇ! ಸಸಿಗಳನ್ನು ನೆಡಲು ಇದು ಸೂಕ್ತ ಕಾಲ: ಯಾಕೆ ಗೊತ್ತಾ?

ಕಳೆದೊಂದು ದಶಕದಿಂದ ಎಳನೀರು ಮತ್ತು ತೆಂಗಿನಕಾಯಿಗೆ ಉತ್ತಮ ಬೆಲೆ ದೊರೆಯುತ್ತಿದೆ. ಅದರಲ್ಲಿಯೂ ಕರ್ನಾಟಕದ ಎಳನೀರು ಹೊರ ರಾಜ್ಯಗಳಿಗೆ ನಿತ್ಯವೂ ಸಾಗಾಟವಾಗುತ್ತಿದ್ದು, ತೆಂಗು ಬೆಳೆಗಾರನಿಗೆ ಒಂದಷ್ಟು ಆದಾಯ ತಂದುಕೊಡುತ್ತಿದೆ. ಆದರೆ ಇವತ್ತಿನ ಪರಿಸ್ಥಿಿತಿಯಲ್ಲಿ ತೆಂಗು ಬೆಳೆಯುವುದು ಬೆಳೆಗಾರರಿಗೆ ಸುಲಭವಾಗಿ ಉಳಿದಿಲ್ಲ. ವಾತಾವರಣದ ಏರುಪೇರು, ತಗಲುವ ರೋಗಗಳು, ನಿರ್ವಹಣೆಯ ವೆಚ್ಚಗಳು, ಕೂಲಿಕಾರ್ಮಿಕರ ಸಮಸ್ಯೆಗಳು ಹೀಗೆ ಹತ್ತಾರು ಸಮಸ್ಯೆಗಳು ಬೆಳೆಗಾರರನ್ನು ಕಾಡಲಾರಂಭಿಸಿದೆ. ಆದರೂ ರೈತರು ಹೋರಾಡುತ್ತಾ ಬೆಳೆ ಬೆಳೆಯುತ್ತಿದ್ದಾರೆ.

ತೆಂಗನ್ನು ನಾವು ಕಲ್ಪವೃಕ್ಷವೆಂದೇ ಕರೆಯುತ್ತೇವೆ. ಮೊದಲೆಲ್ಲ ಮನೆ ಬಳಿ ತೆಂಗಿನ ಮರಗಳನ್ನು ನೆಡಲಾಗುತ್ತಿತ್ತು. ಮುಂಜಾನೆ ಎದ್ದು ತೆಂಗಿನ ಮರವನ್ನು ನೋಡಿದರೆ ಅವತ್ತಿನ ದಿನ ಸುಖಮಯವಾಗಿರುತ್ತದೆ ಎಂಬ ನಂಬಿಕೆಯೂ ಇದೆ. ಈಗ ಜನ ಎಲ್ಲವನ್ನೂ ವಾಣಿಜ್ಯದ ದೃಷ್ಟಿಯಿಂದ ನೋಡುವುದರಿಂದ ಮನೆ ಬಳಿ ತೆಂಗಿನ ಮರ ನೆಟ್ಟರೆ ಅದರಿಂದ ಸಮಸ್ಯೆಯಾಗುತ್ತದೆ. ಮತ್ತು ಕಟ್ಟಡ ನಿರ್ಮಾಣಕ್ಕೂ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಹಿಂದಿನವರು ನೆಟ್ಟಿದ್ದ ಮರವನ್ನೇ ಕಡಿದು ಹಾಕುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೈತರು ತೆಂಗು ಬೆಳೆಸಿದ್ದೇ ಆದರೆ ಹಲವು ರೀತಿಯ ಅನುಕೂಲ ಪಡೆಯಲು ಸಾಧ್ಯವಾಗಲಿದೆ.

ಇತ್ತೀಚೆಗೆ ಎಲ್ಲೋ ಒಂದು ಕಡೆ ಬೆಳೆಗಾರರಿಗೂ ಆಸಕ್ತಿ ಕಡಿಮೆಯಾದಂತೆ ಗೋಚರಿಸುತ್ತಿದೆ. ಬಹಳಷ್ಟು ತೆಂಗಿನ ತೋಟಗಳನ್ನು ಸರಿಯಾಗಿ ನಿರ್ವಹಣೆ ಮಾಢುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವರು ಇತ್ತೀಚೆಗೆ ತಗಲುವ ರೋಗ, ಇಳುವರಿಯ ಕೊರತೆ ಹೀಗೆ ಕೆಲವೊಂದು ಸಮಸ್ಯೆಯಿಂದ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹಾಲಿ ಇರುವ ತೆಂಗಿನ ತೋಟಗಳ ಉತ್ಪಾದಕತೆಯಲ್ಲಿ ಹೆಚ್ಚಳ ಮಾಡಲು ಹಾಗೂ ತೋಟಗಳನ್ನು ಅಭಿವೃದ್ಧಿಪಡಿಸಲು ರೈತರು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದು ಈಗಿನ ಅಗತ್ಯತೆಯಾಗಿದೆ.

ಸೂಕ್ತ ತಳಿ ಆಯ್ಕೆ ಮಾಡಿಕೊಳ್ಳುವುದು ಅಗತ್ಯ

ಇನ್ನು ಗಿಡಗಳನ್ನು ನೆಡಬೇಕೆಂದುಕೊಳ್ಳುವವರು ಹವಾಗುಣ, ಮಣ್ಣು, ಉತ್ತಮ ತಳಿ, ಸಸ್ಯ ಸಾಮಾಗ್ರಿ, ಭೂಮಿಯನ್ನು ಸಿದ್ಧಗೊಳಿಸುವುದು, ಸಸಿಗಳನ್ನು ನೆಡುವ ಅಂತರ, ನೆಡುವ ಕಾಲ, ಕೀಟ ಮತ್ತು ರೋಗಗಳ ಹತೋಟಿ ಮತ್ತಿತರ ಬಗ್ಗೆ ಗಮನಹರಿಸುವುದು ಅತ್ಯಗತ್ಯವಾಗಿದೆ. ತೆಂಗು ಉಷ್ಣವಲಯದ ಬೆಳೆಯಾಗಿರುವುದರಿಂದ ಅದಕ್ಕೆ ಹೆಚ್ಚಿನ ಬಿಸಿಲು ಹಾಗೂ ಆರ್ದ್ರತೆಗಳು ಇರಬೇಕು.

ಸರಾಸರಿ ವಾರ್ಷಿಕ ಉಷ್ಣತೆ 27 ಡಿಗ್ರಿ ಸೆಲ್ಷಿಯಸ್ ಇದ್ದು ಅದರ ಆಚೀಚೆ ಸ್ವಲ್ಪ5 ಡಿಗ್ರಿ ಸೆ. ವ್ಯತ್ಯಾಸಗೊಂಡರೂ ಅಡ್ಡಿಯಿಲ್ಲ. ವಾರ್ಷಿಕ ಮಳೆ 1000 ದಿಂದ 3000 ಮಿ.ಮೀ.ಗಳಷ್ಟಿದ್ದು ಅದು ಸಮನಾಗಿ ಹಂಚಿಕೆಯಾಗುವುದಿದ್ದರೆ ಸೂಕ್ತ ವಾರ್ಷಿಕ ಮಳೆ 1000 ಮಿ.ಮೀ.ಗಿಂತ ಕಡಿಮೆ ಇದ್ದಲ್ಲಿ ಅಥವಾ ಅದು ಹಂಚಿಕೆಯಾಗದಿದ್ದಲ್ಲಿ ತೆಂಗನ್ನು ನೀರಾವರಿ ಬೆಳೆಯಾಗಿ ಬೆಳೆಯಬಹುದಾಗಿದೆ.

ಜಂಬಿಟ್ಟಿಗೆ, ತೀರ ಪ್ರದೇಶದ ಮರಳು ಮಣ್ಣಿನ ಭೂಮಿ, ರೇವೆ ಮಣ್ಣು, ಕೆಮ್ಮಣ್ಣು ಮತ್ತು ಇತರ ಫಲವತ್ತಾದ ಮಣ್ಣುಗಳಲ್ಲಿ ತೆಂಗು ಚೆನ್ನಾಗಿ ಬೆಳೆಯುತ್ತದೆ. ಕಾಂಡದ ವೃದ್ಧಿ ಮತ್ತು ಬೆಳವಣಿಗೆ ಹಾಗೂ ಕಾಯಿಬಿಡುವ ವಯಸ್ಸನ್ನನುಸರಿಸಿ ತೆಂಗಿನ ತಳಿಗಳನ್ನು ಎತ್ತರದ ಮತ್ತು ಗಿಡ್ಡ ತಳಿಗಳು ಎಂಬುದಾಗಿ ವರ್ಗೀಕರಿಸಲಾಗಿದೆ. ಗಿಡ್ಡ ತಳಿಗಳ ಮರಗಳು ನೆಟ್ಟ ಮೂರ್ನಾಲ್ಕು ವರ್ಷಗಳಲ್ಲಿ ಫಲಕಚ್ಚಿದರೆ ಎತ್ತರದ ತಳಿಗಳ ಮರಗಳು ನೆಟ್ಟ 6ರಿಂದ 7ವರ್ಷಗಳಲ್ಲಿ ಫಲ ಬಿಡಲು ಆರಂಭಿಸುತ್ತವೆ. ಗಿಡ್ಡ ಮಿಶ್ರ ತಳಿ ಉತ್ಪಾದನೆಯಲ್ಲಿ ತಾಯಿ ಮರಗಳಾಗಿ ಮತ್ತು ಎಳನೀರು ಕೀಳುವ ಉದ್ದೇಶಗಳಿಗೆ ಬಳಸಲು ಚೌಘಾಟ್ ಆರೆಂಜ್ ಡ್ವಾರ್ಫ್ ತಳಿ ಸೂಕ್ತವಾಗಿದೆ.

ಮುಂಗಾರು ಆರಂಭದಲ್ಲಿ ಗಿಡನೆಡಬೇಕು

ಆಯಾ ಪ್ರದೇಶದ ಹವಾಗುಣವನ್ನನುಸರಿಸಿ ಸಸಿಯನ್ನು ನೆಡಬೇಕಾಗುತ್ತದೆ. ಸಾಮಾನ್ಯವಾಗಿ ಮುಂಗಾರಿನ ಪ್ರಾರಂಭದಲ್ಲಿ ನೆಡುವುದೇ ಹೆಚ್ಚು. ಅಧಿಕ ಮಳೆ ಇರುವ ಪ್ರದೇಶಗಳಲ್ಲಿ ಮುಂಗಾರಿನ ನಂತರ ನೆಡಬಹುದು. ನೀರಾವರಿ ಸೌಲಭ್ಯವಿದ್ದಲ್ಲಿ ವರ್ಷದ ಯಾವ ಕಾಲದಲ್ಲಿ ಬೇಕಾದರೂ ನೆಡಬಹುದು. ಗುಂಡಿಯನ್ನು ತುಂಬಿದ ನಂತರ ನಾಲ್ಕರಿಂದ ಆರು ಗರಿಗಳಿರುವ ಹಾಗೂ 10 ರಿಂದ 12 ಸೆಂ.ಮೀ. ದಪ್ಪ ಕುತ್ತಿಗೆ ಭಾಗ ಇರುವ 9 ರಿಂದ 12ತಿಂಗಳ ವಯಸ್ಸಿನ ಸದೃಢವಿರುವ ಸಸಿಗಳನ್ನು ಆರಿಸಿ ತಲಾ ಒಂದರಂತೆ ಗುಂಡಿಗಳಲ್ಲಿ ನೆಡಬೇಕು. ಮಧ್ಯಭಾಗದಲ್ಲಿ ನೆಟ್ಟು ಊರುಗೋಲು ಸಿಕ್ಕಿಸಿಕಟ್ಟಿದಲ್ಲಿ ಅವು ಆಲುಗಾಡುವುದಿಲ್ಲ. ಕುತ್ತಿಗೆ ಭಾಗ ಮಣ್ಣಿನಿಂದ ಮೇಲೆಯೇ ಇರಬೇಕು.

ತೆಂಗಿನ ಸಿಪ್ಪೆಯು ನೀರಿನಾಂಶದಿಂದ ಕೂಡಿದ್ದು, ಅದರ ತೂಕಕ್ಕಿಂತ 6 ಪಟ್ಟು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಇದು ನೀರಿನ ಶೇಖರಣಾ ವಸ್ತುವಾಗಿ ಕೆಲಸ ಮಾಡುತ್ತದೆ. ತೆಂಗಿನ ನಾರಿನ ಪುಡಿಯನ್ನು ಬುಡದ ಸುತ್ತಲೂ ಮಣ್ಣಿನ ಹೊದಿಕೆಯಾಗಿ ಬಳಸಬಹುದು. ಅದಕ್ಕಾಗಿ ಬುಡದಿಂದ 2 ಮೀಟರ್ ಸುತ್ತಳತೆಯಲ್ಲಿ 10 ಸೆಂಟಿಮೀಟರ್ ದಪ್ಪದ ಪದರದಲ್ಲಿ ಹರಡಬೇಕು.

ಈ ಹೊದಿಕೆಯು ಅದರ ತೂಕಕ್ಕಿಂತ ಸುಮಾರು 10ರಷ್ಟು ನೀರನ್ನು ಹೀರಿ, ಹಿಡಿದಿಟ್ಟುಕೊಳ್ಳುವ ಗುಣವನ್ನು ಹೊಂದಿದೆ. ಅದರ ನಾರಿನಂಶ ಹಾಗೂ ಬಿಡಿ-ಬಿಡಿಯಾದ ಗುಣದಿಂದಾಗಿ ನಾರಿನ ಪುಡಿಯನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಭೌತಿಕ ಗುಣ ಹಾಗೂ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಗಣನೀಯವಾಗಿ ಹೆಚ್ಚುತ್ತದೆ.

Leave a Reply

Your email address will not be published. Required fields are marked *