ಕುಸಿದ ಅಂತರ್ಜಲ : ಬೆಳೆ ಉಳಿಸಿಕೊಳ್ಳಲು ಹೊಸ ಹೊಸ ಪ್ರಯತ್ನದಲ್ಲಿ ರೈತರು

ನೆಲಮಂಗಲ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಳ ರಕ್ಷಣೆಗೆ ರೈತರು ಕೊಳವೆ ಬಾವಿಗಳಿಗೆ ಹೆಚ್ಚುವರಿ ಪೈಪ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ದಿನೇದಿನೆ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆ ಬೇಸಿಗೆಯಲ್ಲಿ ನೀರಿನ ಮೂಲಗಳೇ ಬತ್ತಿ ಹೋಗುತ್ತಿವೆ. ಇದರಿಂದ ರೈತರ ಕೊಳವೆ ಬಾವಿಗಳಲ್ಲಿಯೂ ನೀರು ಕಡಿಮೆಯಾಗುತ್ತಿದ್ದು, ರೈತರೇ ಹೊಸ ಪೈಪ್‌ಗಳನ್ನು ಕೊಂಡು ಕೊಳವೆಬಾವಿಗೆ ಹೆಚ್ಚುವರಿ ಪೈಪ್ ಬಿಡಲು ಮುಂದಾಗಿದ್ದಾರೆ.

ನೆಲಮಂಗಲ ತಾಲೂಕಿನ ಸೋಂಪುರ, ತ್ಯಾಮಗೊಂಡ್ಲು, ಕಸಬಾ ಭಾಗಗಳಲ್ಲಿ ಅಡಿಕೆ, ತೆಂಗು ತೋಟಗಳಿವೆ. ಶ್ರೀಪತಿಹಳ್ಳಿ, ಓಬಳಾಪುರ, ಕಾಮಾಲಾಪುರ, ನರಸೀಪುರ, ಶಿರಗನಹಳ್ಳಿ ಭಾಗದಲ್ಲಿ ತರಕಾರಿ ಬೆಳೆಯುವ ಪ್ರದೇಶಗಳು. ಇನ್ನು ತ್ಯಾಮಗೊಂಡ್ಲು ಹೋಬಳಿಯಲ್ಲಿ ಹೆಚ್ಚು ತೋಟಗಳಿದ್ದು ಹೇಗಾದರೂ ಮಾಡಿ ತೋಟಗಾರಿಕೆ ಫಸಲು ಮತ್ತು ತೋಟಗಾರಿಕೆ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡಿ ಕೊನೆಗೆ ಹೆಚ್ಚುವರಿ ಪೈಪ್‌ಗಳ ಮೂಲಕ ಕೊಳವೆ ಬಾವಿಯಿಂದ ನೀರು ಪೂರೈಸುತ್ತಿದ್ದಾರೆ.

ತಾಲೂಕಿನ ಶೇ. 90ರಷ್ಟು ತೋಟಗಳು ಕೊಳವೆಬಾವಿಗಳಿಂದಲೇ ಬೆಳೆ ಬೆಳೆಯುತ್ತಿದ್ದು, ಅಂತರ್ಜಲವೇ ತೋಟಗಳ ಜೀವಜಲವಾಗಿದೆ. ಕಳೆದ ತಿಂಗಳಿಂದೀಚೆಗೆ ಹಲವಾರು ಕೊಳವೆಬಾವಿಗಳ ನೀರಿನ ಅಂತರ ಕುಸಿದಿದ್ದು ರೈತರಿಗೆ ಆತಂಕ ಹುಟ್ಟಿಸಿದೆ. ಜಿಯೋಲಜಿಸ್ಟ್‌ಗಳ ಸಲಹೆಯಂತೆ ಕೊಳವೆಬಾವಿಗೆ ಹೆಚ್ಚುವರಿ ಪೈಪ್‌ಗಳನ್ನು ಬಿಡಲು ಮುಂದಾಗಿದ್ದಾರೆ.

ಒಂದು ಪೈಪಿನ ಬೆಲೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದ ಮೇಲೆ 2500 ರಿಂದ 2700 ರು.ಗಳವರೆಗಿದೆ. ಇನ್ನೂ ಕಪ್ಪು ಫೈಬರ್ ಪೈಪಿನ ಬೆಲೆ ಹೆಚ್ಚೇ ಇದೆ. ಟ್ರ್ಯಾಕ್ಟರ್ ಬಾಡಿಗೆ, ಮೆಕ್ಯಾನಿಕ್‌ಗಳಿಗೆ ನೀಡುವ ಸರ್ವೀಸ್ ಚಾರ್ಜ್ ಸೇರಿದರೆ ರೈತರ ಕಿಸೆಯಿಂದ ಹಣ ವೆಚ್ಚ ಮಾಡಲೇಬೇಕಿದೆ.

ಇನ್ನುಳಿದಂತೆ ಕೇವಲ ರೈತರ ತೋಟಗಳೇ ಅಲ್ಲದೇ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಪಂ ಅಧೀನದಲ್ಲಿರುವ ಕೊಳವೆ ಬಾವಿಗಳಿಗೂ ಹೆಚ್ಚುವರಿ ಪೈಪ್‌ಗಳನ್ನು ಬಿಡುವ ಕೆಲಸ ಆರಂಭವಾಗಿದೆ ಎನ್ನುತ್ತಾರೆ ಸಂಬಂಧಪಟ್ಟ ಅಧಿಕಾರಿಗಳು.

ಸದ್ಯಕ್ಕೆ ಕಳೆದೆರಡು ದಿನಗಳಿಂದ ಅಲ್ಪಸ್ವಲ್ಪ ಮಳೆಯಾಗಿದೆ. ಮುಂದಿನ ಮೇ, ಜೂನ್ ತಿಂಗಳಲ್ಲಿ ಸಕಾಲದಲ್ಲಿ ಮಳೆ ಬರಬೇಕೆಂದು ಮಳೆರಾಯನಲ್ಲಿ ಮೊರೆ ಇಡುತ್ತಿದ್ದಾರೆ ತಾಲೂಕಿನ ರೈತರು.

ಅಂತರ್ಜಲ ಕುಸಿತಗೊಂಡು ಕೊಳವೆ ಬಾವಿಗಳೂ ಬತ್ತುವ ಹಂತ ತಲುಪಿವೆ. ಯಾವ ಸರ್ಕಾರ ಬಂದರೂ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾತ್ರ ನೀಡುವುದಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ರಾಜ್ಯ, ಕೇಂದ್ರ ಸರ್ಖಾರಗಳ ಮಳೆ ನೀರಿಂಗಿಸುವ, ಅಂತರ್ಜಲ ಮಟ್ಟ ವೃದ್ಧಿಸುವ ಯೋಜನೆಗಳಿಗೆ ಮೊದಲ ಆದ್ಯತೆ ನೀಡಬೇಕು.

-ಈಶ್ವರಯ್ಯ, ರೈತ ಹೊನ್ನೇನಹಳ್ಳಿ

Leave a Reply

Your email address will not be published. Required fields are marked *